“ನಮ್ಮ ದೇಶದಲ್ಲಿ ಭಾನುವಾರ ರಜೆ ಇದೆ. ಬ್ರಿಟಿಷರು ಇಲ್ಲಿ ಆಳ್ವಿಕೆ ನಡೆಸುತ್ತಿದ್ದಾಗ, ಕ್ರಿಶ್ಚಿಯನ್ ಸಮುದಾಯದವರು ರಜಾದಿನವನ್ನು ಹೊಂದಿದ್ದರು, ಈ ಸಂಪ್ರದಾಯವು ಅಂದಿನಿಂದ ಪ್ರಾರಂಭವಾಯಿತು. ಭಾನುವಾರ ಹಿಂದೂಗಳೊಂದಿಗೆ ಸಂಬಂಧ ಹೊಂದಿಲ್ಲ, ಭಾನುವಾರದ ರಜೆ ಕ್ರಿಶ್ಚಿಯನ್ ಸಮುದಾಯದೊಂದಿಗೆ ಸಂಬಂಧ ಹೊಂದಿದೆ. ಇದು ಕಳೆದ 200-300 ವರ್ಷಗಳಿಂದ ನಡೆದುಕೊಂಡು ಬಂದಿದೆ. ಈಗ ಒಂದೊಂದು ಜಿಲ್ಲೆಯಲ್ಲಿ ಭಾನುವಾರದ ರಜೆಗೆ ಬೀಗ ಹಾಕಿದ್ದು ಶುಕ್ರವಾರವೇ ರಜೆ ನೀಡಲಾಗುತ್ತಿದೆ” ಎಂದು ಪ್ರಧಾನಿ ಮೋದಿ ಹೇಳಿಕೆ ನೀಡಿದ್ದಾರೆ.
ಇಲ್ಲಿ ಪ್ರಧಾನಿ ಮೋದಿ ಅವರು ಹೇಳಲು ಹೊರಟಿರುವುದು ಭಾನುವಾರದ ರಜೆಗೂ ಹಿಂದೂಗಳಿಗೂ ಯಾವುದೇ ರೀತಿಯಾದ ಸಂಬಂಧವಿಲ್ಲ. ಭಾರತದಲ್ಲಿ ಬ್ರಿಟೀಷ್ ಆಳ್ವಿಕೆ ಕಾಲದಲ್ಲಿ ಕ್ರೈಸ್ತರು ಪ್ರತೀ ಭಾನುವಾರ ಚರ್ಚ್‌ಗೆ ಹೋಗಬೇಕಾಗಿದ್ದರಿಂದ ಭಾನುವಾರದ ದಿನ ರಜೆ ಘೋಷಣೆಯನ್ನು ಮಾಡಲಾಗಿದೆ. ಈಗ ಜಾರ್ಖಂಡ್‌ನ ಕೆಲವು ಜಿಲ್ಲೆಗಳಲ್ಲಿ ಭಾನುವಾರದ ರಜೆಯನ್ನು ತೆಗೆದು ಹಾಕಿ ಶುಕ್ರವಾರ ರಜೆ ನೀಡಲಾಗುತ್ತಿದೆ. ಎಂದು ತಮ್ಮ ಒಂದು ಭಾಷಣದಲ್ಲೇ ಪರೋಕ್ಷವಾಗಿ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಮುದಾಯದ ಬಗ್ಗೆ ಪ್ರಧಾನಿ ಮೋದಿ ಅವಹೇಳನ ಮಾಡಿದ್ದಾರೆ. ಹಾಗಿದ್ದರೆ ಪ್ರಧಾನಿ ಮೋದಿ ನೀಡಿದ ಹೇಳಿಕೆ ನಿಜವೇ? ಈ ಕುರಿತು ಪರಿಶೀಲನೆ ನಡೆಸೋಣ.
ಫ್ಯಾಕ್ಟ್‌ಚೆಕ್
ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಪರಿಶೀಲನೆ ನಡೆಸಲು ಮುಂದಾಯಿತು ಇದಕ್ಕಾಗಿ ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿತು. ಈ ವೇಳೆ ಭಾರತದ ಟ್ರೇಡ್ ಯೂನಿಯನ್ ಚಳವಳಿಯ ಪಿತಾಮಹ ನಾರಾಯಣ್ ಮೇಘಾಜಿ ಲೋಖಂಡೆ ಅವರ ಕುರಿತ ಮಾಹಿತಿಯು ಲಭ್ಯವಾಯಿತು. ಮತ್ತು ಭಾರತದಲ್ಲಿ ಭಾನುವಾರದ ರಜೆಗೆ ಇವರೇ ಕಾರಣಕರ್ತರು ಎಂಬ ಮಾಹಿತಿಯೂ ಲಭ್ಯವಾಯಿತು.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಹುಡುಕಾಟ ನಡೆಸಿದಾಗ ಭಾರತದಲ್ಲಿದ್ದ ಬ್ರಿಟೀಷರು ಚರ್ಚ್‌ಗಳಿಗೆ ತೆರಳಲು ಮತ್ತು ವಾರಾಂತ್ಯದಲ್ಲಿ ಬಿಡುವು ಮಾಡಿಕೊಳ್ಳಲು ಭಾನುವಾರದ ದಿನ ರಜೆಯನ್ನು ಹೊಂದಿದ್ದರು, ಆದರೆ ಭಾರತದ ಕಾರ್ಮಿಕರಿಗೆ ಮಾತ್ರ ಯಾವುದೇ ರೀತಿಯ ವಾರದ ರಜೆ ಎಂಬುವುದು ಇರಲಿಲ್ಲ. ಹೀಗಾಗಿ ಭಾರತದ ಕಾರ್ಮಿಕರು ವಾರದ 7 ದಿನವೂ ಕೂಡ ದುಡಿಯಲೇ ಬೇಕಾಗಿತ್ತು. ಹೀಗಾಗಿ ಮೊದಲು ಮುಂಬೈನ ಹತ್ತಿ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ ನಾರಾಯಣ್ ಮೇಘಾಜಿ ಲೋಖಂಡೆ ಅವರು 1880ರಲ್ಲಿ ತಮ್ಮ ಕೆಲಸವನ್ನು ತೊರೆದಿದ್ದರು.
ಬಳಿಕ ಮರಾಠಿಯ ದೀನ ಬಂಧು ಪತ್ರಿಕೆಯ ಕಾರ್ಯನಿರ್ವಹಣೆಯನ್ನು ನೋಡಿಕೊಂಡಿದ್ದ ಅವರು, ದೇಶದ ಕಾರ್ಮಿಕರ ಸಮಸ್ಯೆಯನ್ನು ಬಗೆಹರಿಸಲು ಮಿಲ್‌ಹ್ಯಾಂಡ್ಸ್ ಅಸೋಸಿಯೇಷನ್ ಅನ್ನು ಸ್ಥಾಪಿಸಿದರು ಮತ್ತು ನಂತರ ಬಾಂಬೆ ಮಿಲ್ ಹ್ಯಾಂಡ್ಸ್ ಅಸೋಸಿಯೇಷನ್ ಎಂದು ಕರೆಯಲ್ಪಡುವ ಭಾರತದಲ್ಲಿ ಮೊದಲ ಕಾರ್ಮಿಕ ಸಂಘವನ್ನು ಪ್ರಾರಂಭಿಸಿದರು . ಈ ಸಂಘಟನೆಯ ಮೂಲಕ ಭಾನುವಾರ ಭಾರತದ ಕಾರ್ಮಿಕರಿಗೆ ರಜೆ ಘೋಷಣೆ ಮಾಡಲು ಹೆಚ್ಚು ಪ್ರಚಾರ ಮಾಡಲಾಯಿತು
ಇದಾರ ಕೆಲವೇ ವರ್ಷಗಳಲ್ಲಿ ಅಂದರೆ 10 ಜೂನ್ 1890ರಲ್ಲಿ ಬಾಂಬೆಯ ರೇಸ್ ಕೋರ್ಸ್ ಮೈದಾನದಲ್ಲಿ 10,000 ಕಾರ್ಮಿಕರು ಪ್ರತಿಭಟನೆ ನಡೆಸಿ ಮುಷ್ಕರವನ್ನು ಘೋಷಿಸಿದ ನಂತರ, ಗಿರಣಿ ಮಾಲೀಕರ ಸಂಘವು ಅಂತಿಮವಾಗಿ ಶರಣಾಯಿತು ಮತ್ತು 1890 ರಲ್ಲಿ ಕಾರ್ಮಿಕರಿಗೆ ಭಾನುವಾರ ರಜಾದಿನವನ್ನು ಘೋಷಿಸಿತು.
ಇನ್ನು ಈ ಎಲ್ಲಾ ಅಂಶಗಳನ್ನು ದೃಢ ಪಡಿಸುವಂತೆ ಮತ್ತು ಭಾನುವಾರದ ರಜೆಗೆ ಸಂಬಂಧಿಸಿದಂತೆ ಇದೇ ರೀತಿಯ ವಿವರಗಳನ್ನು ಎನ್‌ಎಂ ಲೋಖಂಡೆ ಮಹಾರಾಷ್ಟ್ರ ಇನ್‌ಸ್ಟಿಟ್ಯೂಟ್ ಆಫ್ ಲೇಬರ್ ಸ್ಟಡೀಸ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿಯೂ ಕಾಣಬಹುದು . ಒಟ್ಟಾರೆಯಯಾಗಿ ಹೇಳುವುದಾದರೆ ಭಾರತದಲ್ಲಿ ಭಾನುವಾರದ ರಜೆಗೆ ಕ್ರೈಸ್ತರು ಕಾರಣ ಎಂಬ ಪ್ರಧಾನಿ ಮೋದಿ ಅವರ ಹೇಳಿಕೆ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ.
ಇದನ್ನೂ ಓದಿ : ಸಂಸದೆ ಸ್ವಾತಿ ಮಲಿವಾಲ್ ಮತ್ತು ಧ್ರುವ ರಾಠಿ ನಡುವಿನ ವೈರಲ್ ಫೋನ್ ಕಾಲ್ ಡೀಪ್‌ಫೇಕ್ ಆಗಿದೆ
ಈ ವಿಡಿಯೋ ನೋಡಿ : ಸಂಸದೆ ಸ್ವಾತಿ ಮಲಿವಾಲ್ ಮತ್ತು ಧ್ರುವ ರಾಠಿ ನಡುವಿನ ವೈರಲ್ ಫೋನ್ ಕಾಲ್ ಡೀಪ್‌ಫೇಕ್ ಆಗಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.