ಈಶಾನ್ಯ ಭಾರತದ ಪ್ರಮುಖ ರಾಜ್ಯಗಳಲ್ಲೊಂದಾದ ಮಣಿಪುರವು ಕಳೆದ ಮೂರ್ನಾಲ್ಕು ತಿಂಗಳಿಂದ ರಾಜಕೀಯ ಅಸ್ಥಿರತೆಯಿಂದ, ಕೋಮು ಪೀಡಿತ ಪ್ರದೇಶವಾಗಿ ಮಾರ್ಪಟ್ಟಿದೆ. ಕುಕಿ ಮತ್ತು ಮೇಥಿ ಬುಡಕಟ್ಟುಗಳ ನಡುವೆ ಆರಂಭವಾದ ಸಂಘರ್ಷವು ಇಂದು ಜನಾಂಗೀಯ ಹಿಂಸಾಚಾರದಿಂದ, ಕೊಲೆ, ಸುಲಿಗೆ, ಅತ್ಯಾಚಾರಗಳಿಗೆ ದಾರಿ ಮಾಡಿಕೊಟ್ಟಿದೆ. ಇದಕ್ಕೆ ಕೇಂದ್ರ ಸರ್ಕಾರ ಸರಿಯಾದ ಕ್ರಮಗಳನ್ನು ಕೈಗೊಳ್ಳದಿರುವುದು ಸಹ ಕಾರಣವಾಗಿದೆ ಮತ್ತು ಎರಡು ಬುಡಕಟ್ಟುಗಳ ನಡುವೆ ಸುಳ್ಳು ಸುದ್ದಿಗಳಿಂದ, ಸುಳ್ಳು ಆರೋಪಗಳ ಮೂಲಕ ನಡೆಸಿದ ದ್ವೇಷ ರಾಜಕಾರಣ ಸಹ ಇವತ್ತಿನ ಮಣಿಪುರದ ಸ್ಥಿತಿಗೆ ಕಾರಣವಾಗಿದೆ.
ಈಗ ಇಂತಹದ್ದೆ ಸುಳ್ಳು ಪ್ರತಿಪಾದನೆಯೊಂದು ಹರಿದಾಡುತ್ತಿದ್ದು “ದೊಡ್ಡ ಬ್ರೇಕಿಂಗ್: ಮಣಿಪುರದಲ್ಲಿ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರ ಗುಂಪಿಗೆ ಕಿರುಕುಳ ನೀಡಲು ಪ್ರಯತ್ನಿಸಿದ ಇಬ್ಬರು ಭಾರತೀಯ ಸೈನಿಕರನ್ನು ಥಳಿಸಿ ಕೊಲ್ಲಲಾಗಿದೆ. ತಮಾಷೆಯ ಭಾಗವೆಂದರೆ ಇಡೀ ಸೇನಾ ಘಟಕವು ಘಟನಾ ಸ್ಥಳದಿಂದ ಓಡಿಹೋಗಿದೆ!” ಎಂಬ ತಲೆಬರಹದೊಂದಿಗೆ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.
ಈ ವಿಡಿಯೋವನ್ನು @Ironclad ಎಂಬ ಎಕ್ಸ್ ಖಾತೆಯಿಂದ ಹಂಚಿಕೊಳ್ಳಲಾಗಿದೆ ಮತ್ತು ಸೌತ್ ಏಷಿಯನ್ ಫೈಲ್ಸ್ ಎಂಬ ಫೇಸ್‌ಬುಕ್ ಖಾತೆಯಿಂದ ಹಂಚಿಕೊಳ್ಳಲಾಗಿದೆ.
ಫ್ಯಾಕ್ಟ್‌ಚೆಕ್: ಜನವರಿ 2, 2024 ರಂದು ಮಣಿಪುರದ ಇಥೈ ಲೌಕೊನ್ ಮೀಯಿರ ಪೈಬಿಸ್ ಎಂಬ ಮೇಥಿ ಮಹಿಳಾ ಗುಂಪು ಭದ್ರತಾ ಪಡೆಗಳ ನಿಯೋಜನೆಯ ವಿರುದ್ಧ ಪ್ರತಿಭಟಿಸುತ್ತಿದ್ದಾಗ ಮಹರ್ ರೆಜಿಮೆಂಟ್‌ನ ಸಿಬ್ಬಂದಿಯನ್ನು ಓಡಿಸಿದ್ದಾರೆ. ಆಗ ವೈರಲ್ ಆದ ವೀಡಿಯೋವನ್ನು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಭಾರತೀಯ ಯೋಧರು ಮಹಿಳೆಯರ ಮೇಲೆ ಕಿರುಕುಳ ನೀಡಿದ್ದರ ಕುರಿತು ಇತ್ತೀಚೆಗೆ ಯಾವುದೇ ವರದಿಯಾಗಿಲ್ಲ. ಈ ಕುರಿತು ಇನ್ನಷ್ಟು ಪರೀಕ್ಷಿಸಲು ನಾವು ಗೂಗಲ್ ರಿವರ್ಸ್ ಇಮೇಜ್ ಮೂಲಕ ಕೆಲವು ಕಿ-ಫ್ರೇಮ್‌ಗಳನ್ನು ಬಳಸಿ ಹುಡುಕಿದಾಗ ಈ ವಿಡಿಯೋವನ್ನು ಜನವರಿ 2, 2024 ರಂದು ಯೂಟ್ಯೂಬ್‌ನಲ್ಲಿ “ಮೇಥಿ ಪೈಬಿ ವರ್ಸಸ್ ಇಂಡಿಯನ್ ಆರ್ಮಿ” ಎಂಬ ಶೀರ್ಷಿಕೆಯೊಂದಿಗೆ ಅಪ್ಲೋಡ್ ಮಾಡಲಾಗಿದೆ.
ಮತ್ತೊಂದು ವೀಡಿಯೊವನ್ನು ಜನವರಿ 2, 2024 ರಂದು ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಇದನ್ನು ವಿಭಿನ್ನ ಕೋನ(Angle)ದಿಂದ ಚಿತ್ರೀಕರಿಸಲಾಗಿದೆ, “ಮೇಥಿ ಮೀರಾ ಪೈಬಿ ಕಸುಬಿ ಅಸ್ಸಾಂ ರೈಫಲ್ಸ್‌ನೊಂದಿಗೆ ಹೋರಾಡುತ್ತಿರುವ ವಿಡಿಯೋ #indianarmy” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾಗಿದೆ.
ಮೀರಾ ಪೈಬಿಸ್ ಎಂಬುದು ಮೇಥಿ ಮಹಿಳಾ ಗುಂಪು, ಇದು ರಾಜ್ಯದಲ್ಲಿ ಭಾರತೀಯ ಸೇನಾ ನಿಯೋಜನೆಯನ್ನು ವಿರೋಧಿಸುತ್ತಿದೆ ಮತ್ತು ಮಣಿಪುರದಲ್ಲಿ ಕುಕಿ-ಜೋ ಮಹಿಳೆಯರ ವಿರುದ್ಧ ಜನಾಂಗೀಯ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದೆ ಎಂದು ಆರೋಪಿಸಲಾಗಿದೆ. ಸಧ್ಯ ಮಹರ್ ರೆಜಿಮೆಂಟ್ ಸಿಬ್ಬಂದಿಯನ್ನು ಓಡಿಸಿದ್ದಕ್ಕಾಗಿ ಇಥೈ ಲೌಕಾನ್ ಮೀರಾ ಪೈಬಿಸ್ ವಿರುದ್ಧ ಮಣಿಪುರ ಪೊಲೀಸರು ದಾಖಲಿಸಿರುವ ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಕುಂಬಿಯ ಮೀರಾ ಪೈಬಿಸ್ ಒತ್ತಾಯಿಸಿದ್ದಾರೆ ಎಂದು ವರದಿಗಳು ಹೇಳುತ್ತಿವೆ.
ಇದನ್ನು ಓದಿ: Fact Check | ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಬಿಡುಗಡೆಯಾಗಲಿದೆ ಎಂದು ಅನುರಾಗ್ ಠಾಕೂರ್ ಹೇಳಿಲ್ಲ
ವಿಡಿಯೋ ನೋಡಿ: ಭ್ರಷ್ಟಚಾರ-ಮುಕ್ತ ನಾಯಕರ ಪಟ್ಟಿಯಲ್ಲಿ ಮೋದಿಯವರಿಗೆ ಮೊದಲನೇ ಸ್ಥಾನ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ