Fact Check | ಸಚಿವ ಎಂ.ಬಿ ಪಾಟೀಲ್‌ ವಿರುದ್ಧ ಮಹೇಶ್‌ ವಿಕ್ರಮ್‌ ಹೆಗ್ಡೆ ಹರಡಿದ್ದ ಸುಳ್ಳು ಸುದ್ದಿ ಮತ್ತೊಮ್ಮೆ ವೈರಲ್‌

ಕರ್ನಾಟಕದ ಕಾಂಗ್ರೆಸ್‌ನ ನಾಯಕ ಹಾಗೂ ಸಚಿವ ಡಾ.ಎಂ.ಬಿ ಪಾಟೀಲ್ ಅವರು, ಸೋನಿಯಾ ಗಾಂಧಿಯವರಿಗೆ 10 ಜುಲೈ 2018ರಂದು BLDEA ( ಬಿಜಾಪುರ ಲಿಂಗಾಯತ ಡಿಸ್ಟ್ರಿಕ್ಟ್ ಎಜುಕೇಶನಲ್ ಅಸೋಸಿಯೇಷನ್)  ಲೆಟರ್ ಹೆಡ್ ಮೂಲಕ ಪತ್ರ ಬರೆದಿದ್ದಾರೆ ಎನ್ನಲಾದ ಬರಹಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ಪತ್ರದಲ್ಲಿ “ಕರ್ನಾಟಕದಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಗೆಲ್ಲಲು ಹಿಂದುಗಳನ್ನು ವಿಭಜಿಸಿ ಮುಸ್ಲಿಮರನ್ನು ಒಗ್ಗೂಡಿಸುವ ತಂತ್ರವನ್ನು ಅಳವಡಿಸಿಕೊಂಡಿದೆ ಮತ್ತು ಆ ಮೂಲಕ ಯಶಸ್ಸನ್ನ ಸಾಧಿಸಲಿದೆ ಎಂದು ವೈರಲ್‌ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ಪತ್ರದಲ್ಲಿ 2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾರ್ಯಕತಗೊಳಿಸಬೇಕಾದ ಪ್ರಮುಖ ತಂತ್ರದ ಕುರಿತು ಎಂ.ಬಿ ಪಾಟೀಲ್ ಅವರು ಹಲವಾರು ಮಂತ್ರಿಗಳೊಂದಿಗೆ ಜೊತೆಗೆ ಗ್ಲೋಬಲ್ ಕ್ರಿಶ್ಚಿಯನ್ ಕೌನ್ಸಿಲ್ ಮತ್ತು ವರ್ಲ್ಡ್ ಇಸ್ಲಾಮಿಕ್ ಆರ್ಗನೈಸೇಷನ್ ಪ್ರತಿನಿಧಿಗಳೊಂದಿಗೆ ಸಮಗ್ರ ಚರ್ಚೆ ನಡೆಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.ಈ ಅಂಶವನ್ನೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೇ ನಿಜವೆಂದು ನಂಬಿರುವ ಹಲವಾರು ಎಕ್ಸ್ ಬಳಕೆದಾರರು, ಈ ಪತ್ರವನ್ನು ಹಂಚಿಕೊಂಡಿದ್ದಾರೆ ಮತ್ತು ಅವರ ಪೋಸ್ಟ್‌ನಲ್ಲಿ “ಕಾಂಗ್ರೆಸ್‌ನ ದುರುದ್ದೇಶದ ವ್ಯಾಪ್ತಿಯನ್ನು ಎಚ್ಚರಿಕೆಯಿಂದ ನೋಡಿ. ಬಿಜೆಪಿಯನ್ನು ಸೋಲಿಸಬೇಕಾದರೆ ಹಿಂದುಗಳನ್ನು ವಿಭಜಿಸಿ. ಇಸ್ಲಾಂ ಮತ್ತು ಕ್ರೈಸ್ತರನ್ನು ಒಗ್ಗೂಡಿಸುವ ತಂತ್ರವನ್ನು ಅಳವಡಿಸಲಾಗಿದೆ. ಇದನ್ನು ಮಾಡಲು ಗ್ಲೋಬಲ್ ಕ್ರಿಶ್ಚಿಯನ್ ಕೌನ್ಸಿಲ್ ಮತ್ತು ವರ್ಲ್ಡ್ ಇಸ್ಲಾಮಿಕ್ ಆರ್ಗನೈಸೇಷನ್‌ನಿಂದ ಸಹಾಯವನ್ನು ಪಡೆಯಲಾಗಿದೆ. ಈ ಕುರಿತು ಸ್ವತಃ ಕರ್ನಾಟಕ ಕಾಂಗ್ರೆಸ್ ಸಚಿವ ಎಂ.ಬಿ.ಪಾಟೀಲ್ ಸೋನಿಯಾ ಗಾಂಧಿಯವರಿಗೆ ಪತ್ರದಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ” ಎಂದು ಹಲವಾರು ಮಂದಿ ಪೋಸ್ಟ್ ಮಾಡುತ್ತಿದ್ದಾರೆ.

ಫ್ಯಾಕ್ಟ್‌ಚೆಕ್

ಈ ಕುರಿತು ಸತ್ಯ ಶೋಧನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ಆಗುತ್ತಿರುವ ಲೆಟರ್ ಹೆಡ್ ಅನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿತು. ಈ ವೇಳೆ 2018 ಮೇ ತಿಂಗಳಿನಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಪೋಸ್ಟ್ ಕಾರ್ಡ್ ಎಂಬ ಸುಳ್ಳು ಸುದ್ದಿ ಹಬ್ಬಿಸುವ ನ್ಯೂಸ್‌ ಪೋರ್ಟಲ್‌ನಿಂದ ಈ ಪತ್ರವನ್ನು ಬಹಿರಂಗವಾಗಿ ಪ್ರಕಟಿಸಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.

ಇನ್ನು ಈ ಪತ್ರ ವೈರಲಾಗುತ್ತಿರುವ ಕುರಿತು ಸಚಿವ ಎಂ.ಬಿ. ಪಾಟೀಲ್‌ ಮೂಲ BLDEA  ಲೆಟರ್ ಹೆಡ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಲೆಟರ್ ಹೆಡ್ ಅನ್ನು ತಮ್ಮ ಎಕ್ಸ್ ಮತ್ತು ಫೇಸ್ಬುಕ್ ಖಾತೆಗಳಲ್ಲಿ ಹಂಚಿಕೊಂಡಿದ್ದರು. ಮತ್ತು ಇದೊಂದು ಸುಳ್ಳು ಸುದ್ದಿ ಎಂಬುದನ್ನು ಸ್ಪಷ್ಟಪಡಿಸಿದ್ದರು. ಜೊತೆಗೆ ಪೊಲೀಸರಿಗೆ ದೂರು ನೀಡುತ್ತಿರುವ ಫೋಟೋಗಳನ್ನು ಕೂಡ ಶೇರ್ ಮಾಡಿದ್ದರು. ಅದರಲ್ಲಿ “ಈ ಪತ್ರ ನಕಲಿ.. ಅದನ್ನು ತಯಾರಿಸಿ ಪ್ರಕಟಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇನೆ. ಬಿಜೆಪಿಯ ಹತಾಶೆ ಎದ್ದು ಕಾಣುತ್ತಿದೆ. ಅವರು ಸಂಪೂರ್ಣವಾಗಿ ನಕಲಿ ಪತ್ರಗಳ ಮೇಲೆ ಅವಲಂಬಿತರಾಗಿದ್ದಾರೆ ಹಾಗೂ ಜನರ ಬೆಂಬಲವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಬರೆದುಕೊಂಡಿದ್ದರು.

ಇನ್ನು ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ 16 ಏಪ್ರಿಲ್ 2019 ರಂದು ಕರ್ನಾಟಕ ಕಾಂಗ್ರೆಸ್ ಎಂ.ಬಿ.ಪಾಟೀಲ್ ಅವರ ಪತ್ರಿಕಾಗೋಷ್ಠಿಯ ವಿಡಿಯೋವೊಂದನ್ನು ಪೋಸ್ಟ್ ಮಾಡಿ, ಅದರಲ್ಲಿ “ವೈರಲ್ ಪತ್ರವು ನಕಲಿ ಅದನ್ನು ತಯಾರಿಸಿ ಪ್ರಕಟಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಉಲ್ಲೇಖಿಸಲಾಗಿತ್ತು.ಇನ್ನು ಇಲ್ಲಿ ಅಚ್ಚರಿಯ ವಿಚಾರ ಏನಂದ್ರೆ 2019 ರಲ್ಲಿ ಇದೇ ಸುಳ್ಳು ಮಾಹಿತಿಯನ್ನು ಒಳಗೊಂಡ ವೈರಲ್ ಪತ್ರದೊಂದಿಗೆ ಪೋಸ್ಟ್ ಮಾಡಿದ್ದ ಬಿಜೆಪಿ ಇಂದಿಗೂ ಆ ಸುಳ್ಳು ಸುದ್ದಿಯ  ಪೋಸ್ಟ್ ಅನ್ನು ತನ್ನ ಎಕ್ಸ್‌ ಖಾತೆಯಲ್ಲಿ ಉಳಿಸಿಕೊಂಡಿದೆ.

ಹೀಗೆ  ಸುಳ್ಳು ಸುದ್ದಿಯನ್ನು ಹರಡಿದಂತಹ ಫೇಕ್ ನ್ಯೂಸ್ ಪೆಡ್ಲರ್ ಹಾಗೂ ಪೋಸ್ಟ್ ಕಾರ್ಡ್ ನ್ಯೂಸ್ ಸಹ ಸಂಸ್ಥಾಪಕ ಮಹೇಶ್ ವಿಕ್ರಂ ಹೆಗಡೆ ಬಂಧನವಾಗಿದ್ದರ ಕುರಿತು NDTV 2019 ರಲ್ಲಿ “ಸುಳ್ಳು ಸುದ್ದಿ ಹರಡಿದ ಆರೋಪದ ಅಡಿಯಲ್ಲಿ ಪೋಸ್ಟ್ ಕಾರ್ಡ್ ನ್ಯೂಸ್ ಸಹ ಸಂಸ್ಥಾಪಕ ಮತ್ತೆ ಅರೆಸ್ಟ್..!” ಎಂಬ ಶೀರ್ಷಿಕೆಯ ಅಡಿಯಲ್ಲಿ ವರದಿಯನ್ನು ಪ್ರಕಟಿಸಿತು ಈ ವರದಿಯಲ್ಲಿ ವೈರಲ್ ಆದ ಪತ್ರ ಮತ್ತು ಎಂ.ಬಿ.ಪಾಟೀಲ್ ಅವರ ಪೊಲೀಸ್ ದೂರನ್ನು ಉಲ್ಲೇಖಿಸಲಾಗಿದೆ.

ಒಟ್ಟಾರೆಯಾಗಿ ಸಚಿವ ಎಂ.ಬಿ ಪಾಟೀಲ್‌ ಅವರು ಚುನಾವಣೆ ಗೆಲ್ಲಲು ಹಿಂದೂಗಳನ್ನು ವಿಭಜಿಸಿ ಮತ್ತು ಮುಸ್ಲಿಂ-ಕ್ರೈಸ್ತರನ್ನು ಒಂದುಗೂಡಿಸಿ ಎಂದು ಸೋನಿಯ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ ಎಂಬುದು ಹಳೆಯ ಸುಳ್ಳು ಸುದ್ದಿ, ಮತ್ತು ಈ ಸುಳ್ಳು ಸುದ್ದಿ ಹರಡಿದ್ದ ಕಾರಣಕ್ಕೆ ಫೇಕ್‌ ನ್ಯೂಸ್‌ ಪೆಡ್ಲರ್‌ ಮತ್ತು ಪೋಸ್ಟ್‌ ಕಾರ್ಡ್ ನ್ಯೂಸ್‌ ಸಹ ಸಂಸ್ಥಾಪಕ ಮಹೇಶ್‌ ವಿಕ್ರಮ ಹೆಗ್ಡೆ ಬಂಧನವೂ ಆಗಿತ್ತು..


ಇದನ್ನೂ ಓದಿ : ಗಾಂಧಿ ಸಿನಿಮಾ ಬಿಡುಗಡೆಗೂ ಮುನ್ನ ಅವರ ಬಗ್ಗೆ ಜಗತ್ತಿಗೆ ತಿಳಿದಿರಲಿಲ್ಲ ಎಂಬ ಮೋದಿ ಹೇಳಿಕೆ ಸುಳ್ಳು


ಈ ವಿಡಿಯೋ ನೋಡಿ : ಗಾಂಧಿ ಸಿನಿಮಾ ಬಿಡುಗಡೆಗೂ ಮುನ್ನ ಅವರ ಬಗ್ಗೆ ಜಗತ್ತಿಗೆ ತಿಳಿದಿರಲಿಲ್ಲ ಎಂಬ ಮೋದಿ ಹೇಳಿಕೆ ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *