Fact Check | ಕೇರಳದ ರಸ್ತೆಯ ಮೇಲೆ ತ್ರಿವರ್ಣ ಧ್ವಜ ಚಿತ್ರ ಬಿಡಿಸಲಾಗಿದೆ ಎಂಬುದು ಸುಳ್ಳು

” ಈ ವಿಡಿಯೋ ನೋಡಿ ಕೇರಳದ ರಸ್ತೆಯೊಂದರ ಮೇಲೆ ಭಾರತದ ತ್ರಿವರ್ಣ ಧ್ವಜದ ಚಿತ್ರವನ್ನು ಬಿಡಿಸಲಾಗಿದೆ. ಇದೇ ಚಿತ್ರದ ಮೇಲೆ ಕಾರು ಸೇರಿದಂತೆ ಹಲವು ವಾಹನಗಳು ಓಡಾಡುತ್ತಿವೆ. ಹೀಗಿದ್ದರೂ ಕೂಡ ಯಾರೂ ಈ ಬಗ್ಗೆ ಪ್ರಶ್ನಿಸುತ್ತಿಲ್ಲ. ಬದಲಾಗಿ ಅಲ್ಲಿರುವವರೆಲ್ಲ ಪಾಕಿಸ್ತಾನದ ಧ್ವಜವನ್ನು ಹಿಡಿದುಕೊಂಡು ಪಾಕಿಸ್ತಾನದ ಪರ ಘೋಷಣೆಯನ್ನು ಕೂಗುತ್ತಿದ್ದಾರೆ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಈ ವಿಡಿಯೋ ನೋಡಿದ ಬಹುತೇಕರು ಕೇರಳದ ವಿರುದ್ಧ ಹಾಗೂ ಅಲ್ಲಿನ ಕಮ್ಯುನಿಷ್ಟ್‌ ಸರ್ಕಾರದ ವಿರುದ್ಧ ವ್ಯಾಪಕವಾಗಿ ಆಕ್ರೋಶ ವ್ಯಕ್ತ ಪಡಿಸುತ್ತಿರುವುದರ ಜೊತೆಗೆ, ಸಾಮಾಜಿಕ ಜಾಲತಾಣದಲ್ಲಿ ನಕರಾತ್ಮಕವಾಗಿ ತಮ್ಮ ಅಭಿಪ್ರಾಯಗಳನ್ನು ಕೂಡ ವ್ಯಕ್ತ ಪಡಿಸುತ್ತಿದ್ದಾರೆ. ಇದರ ಜೊತೆಗೆ ವೈರಲ್‌ ವಿಡಿಯೋವನ್ನು ಸಾಕಷ್ಟು ಜನ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ವೈರಲ್‌ ಆಗುತ್ತಿರುವ ವಿಡಿಯೋದಲ್ಲಿನ ಅಸಲಿಯತ್ತು ಏನು ಎಂಬುದನ್ನು ಈ ಅಂಕಣದಲ್ಲಿ ಪರಿಶೀಲಿಸೋಣ.

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾದ ವಿಡಿಯೋ
ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾದ ವಿಡಿಯೋ

ಫ್ಯಾಕ್ಟ್‌ಚೆಕ್‌

ಈ ಕುರಿತು ಸತ್ಯಶೋಧನೆಗೆ ಮುಂದಾದ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ವಿಡಿಯೋವಿನ ಕೆಲವೊಂದು ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿತು. ಈ ವೇಳೆ ವಿಡಿಯೋಗೆ ಸಂಬಂಧಿಸಿದ್ದಂತೆ ಇದೇ ರೀತಿಯ ಹಲವು ವಿಡಿಯೋಗಳು ಕಂಡು ಬಂದಿವೆ. ಆದರೆ ಇಲ್ಲಿ ಗಮನಾರ್ಹ ವಿಚಾರವೆಂದರೆ ಈ ವಿಡಿಯೋ 10 ಮಾರ್ಚ್‌ 2020ರಿಂದಲೂ ಸಾಮಾಜಿಕ ಜಾಲತಾಣದಲ್ಲಿ ಇದೇ ಆಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂಬುದು. ಆದರೆ ಇದನ್ನೂ ಪರಿಶೀಲಿಸದೇ ಸಾಕಷ್ಟು ಮಂದಿ ಇದೇ ವಿಡಿಯೋವನ್ನು ಇಂದಿಗೂ ಹಂಚಿಕೊಳ್ಳುತ್ತಿದ್ದಾರೆ.

ಇನ್ನು ಹೆಚ್ಚಿನ ಹುಡುಕಾಟ ನಡೆಸಿದಾಗ 6 ಜೂನ್‌ 2022 ರಂದು ಯಟ್ಯೂಬ್‌ನಲ್ಲಿ ಹಂಚಿಕೊಂಡ ವಿಡಿಯೋವೊಂದು ಕಂಡು ಬಂದಿದ್ದು ಅದರಲ್ಲಿ “ಪಾಕಿಸ್ತಾನದ ಜನರು ತ್ರಿವರ್ಣ ಧ್ವಜದ ಚಿತ್ರದ ಮೇಲೆ ಕಾರು ಓಡಿಸುತ್ತಿದ್ದಾರೆ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವೊಂದು ಪತ್ತೆಯಾಗಿದೆ. ಅಲ್ಲಿಗೆ ಈ ವಿಡಿಯೋ ಕೇರಳದಲ್ಲ ಪಾಕಿಸ್ತಾನದ್ದು ಎಂಬುದು ಸ್ಪಷ್ಟವಾಗಿತ್ತು.

ಇನ್ನೂ ಹೆಚ್ಚಿನ  ಮಾಹಿತಿಗಾಗಿ ಅದೇ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ “ಸನಮ್‌ ಬುಟಿಕ್‌” ಎಂಬ ಹೆಸರಿನ ಅಂಗಡಿಯೊಂದು ಕಂಡು ಬಂದಿದೆ. ಇದೇ ಅಂಗಡಿಯ ಹೆಸರನ್ನು ಪರಿಶೀಲಿಸಿದಾಗ ಇದು ಪಾಕಿಸ್ತಾನದ ಕರಾಚಿಯಲ್ಲಿರುವುದು ಖಚಿತವಾಗಿದೆ.

ಗೂಗಲ್‌ ಮ್ಯಾಪ್‌ನಲ್ಲಿ ಕಂಡು ಬಂದ ಪಾಕಿಸ್ತಾನದ ಕರಾಚಿಯಲ್ಲಿನ ಸುಮಾನ್‌ ಬುಟಿಕ್‌
ಗೂಗಲ್‌ ಮ್ಯಾಪ್‌ನಲ್ಲಿ ಕಂಡು ಬಂದ ಪಾಕಿಸ್ತಾನದ ಕರಾಚಿಯಲ್ಲಿನ ಸುಮಾನ್‌ ಬುಟಿಕ್‌

ಇನ್ನೂ ಗೂಗಲ್‌ ಮ್ಯಾಪ್‌ ಸಹಾಯದೊಂದಿಗೆ ಇಲ್ಲಿನ ಸ್ಟ್ರೀಟ್‌ ವೀವ್‌ ಅನ್ನು ಗಮನಿಸಿದಾಗ ವೈರಲ್‌  ವಿಡಿಯೋದಲ್ಲಿನ ಸ್ಥಳಕ್ಕೂ ಪಾಕಿಸ್ತಾನದ ಈ ಸ್ಥಳಕ್ಕೂ ಸಾಕಷ್ಟು ಹೋಲಿಕೆಗಳು ಕಂಡು ಬಂದಿವೆ. ಕೇವಲ ಇಷ್ಟು ಮಾತ್ರವಲ್ಲದೆ ವೈರಲ್‌ ವಿಡಿಯೋದಲ್ಲಿನ ಬಿಲ್ಡಿಂಗ್‌ ಮತ್ತು ಈ ಸ್ಟ್ರೀಟ್‌ ವೀವ್‌ನಲ್ಲಿ ಕಂಡು ಬಂದ ಬಿಲ್ಡಿಂಗ್‌ ಒಂದೇ ಆಗಿದ್ದು ಈ ವಿಡಿಯೋ ಪಾಕಿಸ್ತಾನದ್ದೇ ಎಂಬುದು ದೃಢ ಪಟ್ಟಿದೆ.

ಈ ವೈರಲ್‌ ವಿಡಿಯೋದಲ್ಲಿ ಆಟೋವನ್ನು ಗಮನಿಸಿದಾಗ ಕಂದು ಮತ್ತು ತಿಳಿ ಬೂದಿ ಬಣ್ಣದ ಆಟೋಗಳು ಕೂಡ ಕಂಡು ಬಂದಿದ್ದು, ಇದು ಪಾಕಿಸ್ತಾನದಲ್ಲೇ ಹೆಚ್ಚಾಗಿ ಕಂಡು ಬರುತ್ತವೇ. ಇನ್ನೂ ಇದೇ ವಿಡಿಯೋದಲ್ಲಿ ಸ್ಥಳೀಯ ಜನರು ಪಾಕಿಸ್ತಾನದ ಧ್ವಜವನ್ನು ಹಿಡಿದಿರುವುದನ್ನು ಕೂಡ ಕಾಣಬಹುದಾಗಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈ ವಿಡಿಯೋ ಪಾಕಿಸ್ತಾನಕ್ಕೆ ಸಂಬಂಧಿಸಿದ್ದು, ಮತ್ತು ಈ ವಿಡಿಯೋಗೂ ಕೇರಳಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂಬುದು ದೃಢ ಪಟ್ಟಿದೆ.


ಇದನ್ನೂ ಓದಿ : ಕಾಂಗ್ರೆಸ್‌ ನಿಮ್ಮ ಹಣ ದೋಚಿ ಮುಸ್ಲಿಮರಿಗೆ ಕೊಡುತ್ತದೆ ಎಂದು ಖರ್ಗೆ ಹೇಳಿಲ್ಲ. ಇದು ಎಡಿಟೆಡ್‌ ವಿಡಿಯೋ


ಈ ವಿಡಿಯೋ ನೋಡಿ : ಕಾಂಗ್ರೆಸ್‌ ನಿಮ್ಮ ಹಣ ದೋಚಿ ಮುಸ್ಲಿಮರಿಗೆ ಕೊಡುತ್ತದೆ ಎಂದು ಖರ್ಗೆ ಹೇಳಿಲ್ಲ. ಇದು ಎಡಿಟೆಡ್‌ ವಿಡಿಯೋ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *